ಆಮೆಯ ಚಿಪ್ಪು -
	ವ್ಯಾಪಾರಕ್ಕೆ ಬರುವ ಆಮೆಚಿಪ್ಪುಗಳು ಕಡಲಾಮೆಗಳ ಅತಿ ಚಿಕ್ಕದಾದ ಕಿಲೋನಿ ಇಂಬ್ರಿಕೇಟಾ ಎಂಬ ಜಾತಿಯ ಆಮೆಯ ಉಪತ್ವಕ್ಕಿನ ಹಲಗೆಗಳು. ಬೆನ್ನಿನ ಮೇಲೆ ಇಂಥ ಹಲಗೆಗಳುಂಟು. ಇವು ಒಂದರ ಮೇಲೊಂದು ಹೆಂಚು ಹೊದಿಸಿದ ಹಾಗೆ ಇರುವುದರಿಂದ ಚಿಪ್ಪು ದೊಡ್ಡದಾಗಿರುತ್ತವೆ. ಅತಿ ದೊಡ್ಡದೆಂದರೆ 18" ರಿಂದ 13" ಇದ್ದು 0.31 ಗ್ರಾಂ ತೂಕವಿರುತ್ತವೆ. ಅದು ಕೊಂಬಿಗಿಂತ ಗಟ್ಟಿಯೂ, ಪೆಡಸೂ ಆಗಿರುತ್ತದೆ. ಬಣ್ಣವಿನ್ಯಾಸದ ಮೇಲೆ ಅದಕ್ಕೆ ಬೆಲೆ ಕಟ್ಟುತ್ತಾರೆ. ಇವು ಉಷ್ಣವಲಯದ ಎಲ್ಲ ಸಮುದ್ರಗಳಲ್ಲಿ ದೊರಕಿದರೂ ಸೆಲಿಬಿಸ್ ದ್ವೀಪದಿಂದ ನ್ಯೂಗಿನಿವರೆಗಿನ ಸಾಗರದ ಪ್ರದೇಶಗಳಲ್ಲಿ ಸಿಕ್ಕತಕ್ಕವೂ ಉತ್ಕøಷ್ಟವಾದುವು. ತಗಡುಗಳನ್ನು ಶರೀರದ ಅಸ್ಥಿಯಿಂದ ಕಾಯಿಸಿ ಬೇರ್ಪಡಿಸಲಾಗುತ್ತದೆ. ಮೊದಲು ಡುಬ್ಬಾಗಿ ದೋಣಿಯ ಅಡಿತಟ್ಟೆಯಂತಿರುತ್ತದೆ. ಉಷ್ಣ ಮತ್ತು ಒತ್ತಡಗಳಿಂದ ಚಪ್ಪಟೆ ಮಾಡಿ ಒಂದಕ್ಕೊಂದು ಬೆಸೆದುಕೊಳ್ಳುವಂತೆ ಮಾಡುತ್ತಾರೆ. ಅದರಿಂದ ಪೆಟ್ಟಿಗೆ, ನಶ್ಯದ ಡಬ್ಬಿ, ಕನ್ನಡಕದ ಕಟ್ಟು, ಬಾಚಣಿಗೆ ಇತ್ಯಾದಿ ಸಾಮಾನುಗಳನ್ನು ತಯಾರಿಸುತ್ತಾರೆ. ಈಚೆಗೆ ಸೆಲುಲಾಯಿಡ್ ಮತ್ತು ಪ್ಲ್ಯಾಸ್ಟಿಕ್ ಪದಾರ್ಥಗಳು ಬಂದ ನಂತರ ಇದರ ಬಳಕೆ ಕಡಿಮೆಯಾಗಿದೆ.

	ಎರಿಮೋಕೆಲಿಸ್ ಎಂಬ ಬಹು ಚಿಕ್ಕದಾದ ಒಂದು ಸಮುದ್ರದಾಮೆಯ ಹೊರಚಿಪ್ಪು ಕೊಂಬಿನಂಥ ವಸ್ತುವಿನಿಂದ ರಚನೆಯಾಗಿದ್ದು ಬಹಳ ವೈವಿಧ್ಯವನ್ನು ಪ್ರದರ್ಶಿಸುತ್ತದೆ. ನಾನಾ ಬಣ್ಣಗಳನ್ನು ಹೊಂದಿದೆ. ಅತ್ಯುತ್ತಮವಾದ ಆಮೆಚಿಪ್ಪುಗಳು ಸೆಲಿಬಸ್, ನ್ಯೂಗಿನೀ, ವೆಸ್ಟ್ ಇಂಡೀಸ್ ಮತ್ತು ಬ್ರೆಜಿಲ್ ದೇಶಗಳಿಂದ ಆಮದಾಗುತ್ತವೆ.					  
 (ಎಂ.ಡಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ